ಡ್ರಗ್ಸ ಬಗ್ಗೆ ಮಾತನಾಡುತ್ತಾ ನಟಿಯರನ್ನು ಅವಹೇಳನ ಮಾಡುವುದು ಎಷ್ಟು ಸರಿ?


Kannada actor Ragini Dwivedi's residence raided in drugs case, actor  summoned - regional movies - Hindustan Times

ಡ್ರಗ್ಸ ಬಗ್ಗೆ ಮಾತನಾಡುತ್ತಾ ನಟಿಯರನ್ನು ಅವಹೇಳನ ಮಾಡುವುದು ಎಷ್ಟು ಸರಿ?

'ಹೀಗೆಲ್ಲ ಮಾತನಾಡುವುದನ್ನು ಅಸಹ್ಯ ಎಂದು ಹೇಳಬಹುದೇ ಹೊರತು ಮತ್ತೇನು ಹೇಳಲಿಕ್ಕೆ ಆಗಲ್ಲ'. ಡ್ರಗ್ಸ್ ವಿಚಾರಗವಾಗಿ ಹೇಳಿಕೆ ನೀಡುವ ಭರದಲ್ಲಿ ಕೆಲವರು ಹೆಣ್ಣುಮಕ್ಕಳನ್ನು ಅವಹೇಳನ ಮಾಡುತ್ತಿರುವ ಬಗ್ಗೆ ಹಿರಿಯ ನಟಿ ತಾರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಿತ್ರರಂಗದಲ್ಲಿ ಡ್ರಗ್ಸ್ ಜಾಲದ ವಿಚಾರ ಸದ್ದು ಮಾಡುತ್ತಿದೆ. ಚಂದನವನದ ಕೆಲವು ನಟ-ನಟಿಯರು ನಶೆಯ ಗುಂಗಿನಲ್ಲಿ ತೇಲುತ್ತಿದ್ದಾರೆ, ಕೆಲವರಿಗೆ ಡ್ರಗ್ಸ್ ಜಾಲದ ನಂಟಿಗೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಸಮಾಜಕ್ಕೆ ಮಾದರಿಯಾಗಬೇಕಾದ ದೊಡ್ಡವರು, ಗೌರವಯುತ ಸ್ಥಾನದಲ್ಲಿರುವವರು ಇಂದು ಕ್ಯಾಮರಾದ ಮುಂದೆ ಕುಳಿತು ಡ್ರಗ್ಸ್ ವಿಚಾರವಾಗಿ ಮಾತನಾಡುತ್ತ, ಮಹಿಳೆಯರ ಬಗ್ಗೆ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಡ್ರಗ್ಸ್ ನಿರ್ಮೂಲನೆ ಮಾಡಬೇಕೆಂದು ಪಣತೊಟ್ಟಿರುವವರು ಮಾಧ್ಯಮಗಳಲ್ಲಿ, ಪತ್ರಿಕಾಗೋಷ್ಠಿಗಳಲ್ಲಿ ಮಾತನಾಡುತ್ತ ಹೆಣ್ಣುಮಕ್ಕಳ ಬಗ್ಗೆ ಅದರಲ್ಲೂ ನಟಿಯರ ಬಗ್ಗೆ ಅವಹೇಳನ ಮಾಡುತ್ತಿದ್ದಾರೆ. ಡ್ರಗ್ಸ್ ವಿರುದ್ಧದ ಹೋರಾಟ, ಅವರ ಸಾಮಾಜಿಕ ಕಳಕಳಿ ಸ್ವಾಗತಾರ್ಹ. ಆದರೆ ಈ ವಿಚಾರದಲ್ಲಿ ನಟಿಯರ ಹೆಸರನ್ನು ಹೇಳಿ ಅವರನ್ನು ವೈಯಕ್ತಿಕವಾಗಿ ತೇಜೋವಧೆ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಉದ್ಬವವಾಗಿದೆ.
ಪ್ರಶಾಂತ್ ಸಂಬರ್ಗಿ ಹೇಳಿದ್ದು ಸರಿನಾ? ಚಿತ್ರರಂಗದಲ್ಲಿ ಡ್ರಗ್ಸ್ ಬಳಕೆಯ ವಿಚಾರವಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ಹೇಳಿದ ಮಾತುಗಳು ಮಹಿಳಾಲೋಕಕ್ಕೆ ಮುಜುಗರ ಉಂಟು ಮಾಡಿದೆ. ಡ್ರಗ್ ವಿಚಾರವಾಗಿ ನಡೆಯುತ್ತಿದ್ದ ಚರ್ಚೆಯಲ್ಲಿ ನಟಿ ಸಂಜನಾ ಮತ್ತು ರಾಗಿಣಿ ಹೆಸರು ತೆಗೆದುಕೊಂಡ ಪ್ರಶಾಂತ್ ಸಂಬರ್ಗಿ "ರಾಗಿಣಿ ಏನ್ ಘಮಘಮ ಅಂತಾಳಾ? ನಟಿ ಸಂಜನಾ ಹೆಸರು ಹೇಳಿ ಬಾಯಿ ಯಾಕೆ ಗಲೀಜು ಮಾಡಿಕೊಳ್ಳಲಿ?'' ಎಂದಿದ್ದರು. ಈ ಮಾತುಗಳು ದೊಡ್ಡವರ ಸಣ್ಣತನವನ್ನು ಎತ್ತಿತೋರಿಸುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.


ಗುರುಪ್ರಸಾದ್ ಹೀಗೆ ಹೇಳಬಹುದಾ?
 ಖಾಸಗಿ ವಾಹಿನಿಯಲ್ಲಿ ಕುಳಿತು ನಿರ್ದೇಶಕ ಗುರುಪ್ರಸಾದ್, ಚಿತ್ರರಂಗಕ್ಕೆ ಡ್ರಗ್ಸ್ ಜಾಲದ ನಂಟಿನ ಬಗ್ಗೆ ಮಾತನಾಡುತ್ತ, "ಇಂಡಸ್ಟ್ರಿಗೆ ಟ್ಯಾಲೆಂಟ್ ಇರೋರು ಬರಲ್ಲ, ಟ್ಯಾಲೆಂಟ್ ತೋರಿಸು ಎಂದರೆ ತೊಡೆ ತೋರಿಸುತ್ತಾರೆ, ಅದು ಇಂಡಸ್ಟ್ರಿಯ ತಪ್ಪಲ್ಲ, ಹುಡುಗಿಯ ತಪ್ಪು" ಎನ್ನುತ್ತಾರೆ. ಈ ಮಾತಿಗೂ ಡ್ರಗ್ಸ್ ವಿಚಾರಕ್ಕೂ ಎಲ್ಲಿಯ ಸಂಬಂಧ. ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತ ನಿರೂಪಕನಾದರು ಈ ಬಗ್ಗೆ ಪ್ರಶ್ನೆ ಮಾಡಬೇಕಲ್ಲವೇ? ಹಾಗಾದರೆ ಇವರ ನಿಜವಾದ ಉದ್ದೇಶವಾದರು ಏನು? ಇಲ್ಲಿ ನಿಜಕ್ಕು ಡ್ರಗ್ಸ್ ವಿಚಾರ ಚರ್ಚೆಯಾಗುತ್ತಿದೆಯಾ, ಅಥವಾ ಮಹಿಳೆಯರನ್ನು ಅವಹೇಳನ ಮಾಡುವುದೇ ಇವರ ಉದ್ದೇಶನಾ? ಇದನ್ನು ಕೇಳುವವರು ಯಾರು ಇಲ್ಲವಾ?

ನಟಿ ತಾರಾ ಹೇಳಿದ್ದೇನು? 
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ನಟಿ ತಾರಾ "ಹೀಗೆಲ್ಲ ಮಾತನಾಡುವುದನ್ನು ಅಸಹ್ಯ ಎಂದು ಹೇಳಬಹುದೇ ಹೊರತು ಮತ್ತೇನು ಹೇಳಲಿಕ್ಕೆ ಆಗಲ್ಲ. ಡ್ರಗ್ಸ್ ವಿಚಾರದ ಬಗ್ಗೆ ಮಾತ್ರ ಮಾತನಾಡಬೇಕು, ಚರ್ಚೆ ಮಾಡಬೇಕು ಅವರು ತಪ್ಪು ಮಾಡಿದ್ದರೆ ಕಾನೂನು ಇದೆ ನೋಡಿಕೊಳ್ಳುತ್ತೆ. ಅದು ಬಿಟ್ಟು ಹೆಣ್ಣುಮಕ್ಕಳ ಬಗ್ಗೆ ಇಂತ ಕೀಳುಮಟ್ಟದ ಮಾತುಗಳನ್ನು ಆಡುವುದು ಸರಿಯಲ್ಲ" ಎಂದಿದ್ದಾರೆ.
ನಟಿಯರೇ ಏಕೆ ಇಲ್ಲಿ ಟಾರ್ಗೆಟ್? ಡ್ರಗ್ಸ್ ಜಾಲ ಭೇದಿಸುವುದು ಇವರ ಉದ್ದೇಶ ಆಗಿರಬಹದು, ಉತ್ತಮ ಕೆಲಸವನ್ನೇ ಮಾಡುತ್ತಿರಬಹುದು. ಆದರೆ ಇಲ್ಲಿ ಹೆಣ್ಣು ಮಕ್ಕಳನ್ನೇ ಯಾಕೆ ಟಾರ್ಗೆಟ್ ಮಾಡುತ್ತಿದ್ದಾರೆ ಎನ್ನುವುದು ದೊಡ್ಡ ಪ್ರಶ್ನೆ. ಇಲ್ಲಿ ಕೀಳು ಮಟ್ಟದ ಮಾತುಗಳು ಮಾತ್ರವಲ್ಲ. ತಿಳಿದವರು, ಬುದ್ಧಿವಂತರನ್ನು ಕೂರಿಸಿಕೊಂಡು ಡ್ರಗ್ಸ್ ವಿಚಾರವಾಗಿ ಗಂಟೆಗಟ್ಟಲೆ ಚರ್ಚೆ ಮಾಡುವ ಜೊತೆಗೆ ಟಿವಿ ಪರದೆಗಳ ಮೇಲೆ ನಟಿಯರ ಹಾಟ್ ವಿಡಿಯೋ ತುಣುಕುಗಳನ್ನು ಬಿತ್ತರಿಸುತ್ತ ಹೇಳುತ್ತಿರುವುದಾದರು ಏನು? ಈ ಮೂಲಕ ಮಕ್ಕಳಿಗೆ, ಯುವ ಜನಾಂಗಕ್ಕೆ ಏನು ಸಂದೇಶ ರವಾನಿಸುತ್ತಿದ್ದಾರೆ?

Comments